ರಾಮರಾವ್, ನಂದಮೂರಿ ತಾರಕ 1923-96. ಎನ್.ಟಿ.ಆರ್. ಎಂದೇ ಖ್ಯಾತರಾದ ತೆಲಗು ಚಿತ್ರರಂಗದ ಪ್ರಸಿದ್ಧ ನಾಯಕ ನಟ, ನಿರ್ಮಾಪಕ, ನಿರ್ದೇಶಕ ಹಾಗೂ ರಾಜಕಾರಣಿ. ಸುಮಾರು ಮೂರು ದಶಕಗಳಿಗೂ ಹೆಚ್ಚು ಕಾಲ ತೆಲುಗು ಚಿತ್ರಗಳಲ್ಲಿ ಅಭಿನಯಿಸಿ, ಪೌರಾಣಿಕ ಚಿತ್ರಗಳಿಗೆ ಹೊಸ ಆಯಾಮವನ್ನೂ ಜೀವಂತಿಕೆಯನ್ನೂ ನೀಡಿದ ಅಪೂರ್ವ ಕಲಾವಿದರು. ಆಂಧ್ರಪ್ರದೇಶದ ರಾಜಕಾರಣದಲ್ಲಿ ಹೊಸ ಭೂಮಿಕೆಯೊಂದನ್ನು ಸೃಷ್ಟಿಸಿ ಕಾಂಗ್ರೆಸ್ ಪಕ್ಷ ಆ ರಾಜ್ಯದಲ್ಲಿ ಆಡಳಿತವನ್ನು ಕಳೆದುಕೊಳ್ಳುವಂತೆ ಮಾಡಿದ ರಾಜಕೀಯ ಮತ್ಸದ್ಧಿ. ಇವರು ಹುಟ್ಟಿದ್ದು 1923 ಮೇ 28 ರಂದು ಆಂಧ್ರಪ್ರದೇಶದ ಕೃಷ್ಣ ಜಿಲ್ಲೆಯ ಗುಡಿವಾಡ ತಾಲ್ಲೂಕು ನಿಮ್ಮಕೂರಿನಲ್ಲಿ. ಇವರ ವ್ಯಾಸಂಗ ವಿಜಯವಾಡದಲ್ಲಿ ನಡೆಯಿತು. ಬಿ.ಎ. ಪದವಿ ಪಡೆದ ಅನಂತರ ಸಬ್‍ರಿಜಿಸ್ಟ್ರಾರ್ ಆಗಿ ಸರ್ಕಾರಿ ಕೆಲಸಕ್ಕೆ ಸೇರಿದರು. ಇವರಿಗೆ ಅಭಿನಯದ ಬಗೆಗಿದ್ದ ಆಸಕ್ತಿಯಿಂದಾಗಿ ಕೆಲವೇ ತಿಂಗಳುಗಳಲ್ಲಿ ಕೆಲಸಕ್ಕೆ ರಾಜೀನಾಮೆ ನೀಡಿ ಚಿತ್ರರಂಗ ಪ್ರವೇಶಿಸಿದರು.
 	
ಕಾಲೇಜಿನ ದಿನಗಳಲ್ಲಿಯೇ ಇವರಿಗೆ ನಾಟಕಗಳ ನಿರ್ದೇಶನ ಹಾಗೂ ಅಭಿನಯದಲ್ಲಿ ಆಸಕ್ತಿ ಕುದುರಿತ್ತು. ಆಗ ಇವರು ನಟಿಸಿದ ಸ್ತ್ರೀ ಪಾತ್ರಗಳು ಅಪಾರ ಜನಪ್ರಿಯತೆ ಗಳಿಸಿದವು. ಇವರು ನಟಿಸಿದ ಅನಾರ್ಕಲಿ ಪಾತ್ರ ಹಲವರ ಮೆಚ್ಚುಗೆ, ಪ್ರಶಂಸೆಗೆ ಪಾತ್ರವಾಯಿತು. ಮುಂದೆ ಇವರು ಚಿತ್ರರಂಗ ಪ್ರವೇಶಿಸಲು ಈ ಪಾತ್ರವೇ ಬುನಾದಿಯಾಯಿತು. ಹವ್ಯಾಸಿ ರಂಗತಂಡದ ನಾಟಕದಲ್ಲಿ (1946) ಇವರು ಮೊದಲು ಅಭಿನಯಿಸಲು ಪ್ರಾರಂಭಿಸಿದರು. ಅನಂತರ 1950ರಲ್ಲಿ ಕ್ಷಾಮಪರಿಹಾರ ನಿಧಿಗಾಗಿ ಹಲವಾರು ನಾಟಕಗಳನ್ನು ಅಭಿನಯಿಸಿ ಹಣಸಂಗ್ರಹ ಕಾರ್ಯ ಕೈಗೊಂಡರು.
 	
ಎಲ್. ವಿ. ಪ್ರಸಾದರ `ಮನದೇಶಂ' ಎಂಬ ತೆಲಗು ಚಿತ್ರದ ಮೂಲಕ ರಾಮರಾಯರು ಬೆಳ್ಳಿತೆರೆಗೆ ಪ್ರವೇಶ ಪಡೆದರು. ಬಿ.ಎ. ಸುಬ್ಬರಾವ್‍ರ `ಪಲ್ಲೆಟೂರಿ ಪಿಲ್ಲ ಚಿತ್ರದಲ್ಲಿನ ನಾಯಕಪಾತ್ರ ಇವರ ಘನತೆಯನ್ನು ಹೆಚ್ಚಿಸಿತು. `ಸಾವುಕಾರು ಚಿತ್ರದ ಮೂಲಕ ಚಿತ್ರರಂಗದಲ್ಲಿ ರಾಮರಾವ್ ಅವರ ವರ್ಚಸ್ಸು ಬೆಳೆಯತೊಡಗಿತು. ಸಬ್‍ರಿಜಿಸ್ಟ್ರಾರ್ ಕಚೇರಿಯಲ್ಲಿ ಗುಮಾಸ್ತರಾಗಿದ್ದ ಇವರ ಅಣ್ಣ ತ್ರಿವಿಕ್ರಮರಾವ್ ಅವರು ನ್ಯಾಷನಲ್ ಆರ್ಟ್ ಥಿಯೇಟರ್ (ಎನ್.ಎ.ಟಿ.) ಸಂಸ್ಥೆಯನ್ನು ಪ್ರಾರಂಭಿಸಿದರು. ಈ ಸಂಸ್ಥೆಯ ಮೊದಲ ಚಿತ್ರವಾದ `ತೋಡು ದೊಂಗಲುನಲ್ಲಿ ರಾಮರಾವ್ ಅಭಿನಯಿಸಿದರು. ಈ ಚಿತ್ರ ಹಣಗಳಿಕೆಯಲ್ಲಿ ಸೋತರೂ ತೆಲಗು ಚಿತ್ರರಂಗಕ್ಕೆ ಹೊಸ ಆಯಾಮವನ್ನು ನೀಡಿತು.
 	
ರಾಮರಾವ್ ಅವರ ಬೆಳೆವಣಿಗೆಯನ್ನು ಗಮನಿಸಿ ವಿಜಯಾ ಸ್ಟುಡಿಯೋ ಎಂಬ ಸಂಸ್ಥೆ ಇವರೊಡನೆ ಎರಡು ವರ್ಷಗಳ ಕರಾರನ್ನು ಮಾಡಿಕೊಂಡಿತು. ಈ ಚಿತ್ರಸಂಸ್ಥೆ ತಯಾರಿಸಿದ 'ಪಾತಾಳ ಭೈರವಿ ಆಂಧ್ರ ಚಿತ್ರ ರಂಗದ ಎಲ್ಲ ದಾಖಲೆಗಳನ್ನೂ ಮುರಿದು ಮುನ್ನಡೆಯಿತು. ಈ ಚಿತ್ರದ ತಮಿಳು, ಹಿಂದೀ ಅವತರಣಿಕೆಗಳೂ ಬಿಡುಗಡೆಯಾಗಿ ಜನಪ್ರಿಯವಾದವು. ಅನಂತರ ಬಂದ 'ಮಲ್ಲೇಶ್ವರಿ' ಮತ್ತು 'ಪೆಳ್ಳಿಚೇಸಿ ಚೂಡು ಚಿತ್ರಗಳೂ ಹಣಗಳಿಕೆಯಲ್ಲಿ ಯಶಸ್ವಿಯಾದವು. ಈ ಯಶಸ್ಸಿನಿಂದ ಉತ್ತೇಜಿತರಾದ ರಾಮ್‍ರಾವ್ ಅವರು ಸ್ವಂತ ನಿರ್ಮಾಣ ಸಂಸ್ಥೆಯನ್ನು ಪ್ರಾರಂಭಿಸಿದರು. ಅಕ್ಕಿನೇನಿ ನಾಗೇಶ್ವರರಾವ್ ಜೊತೆಗೆ ತೆಲಗು ಚಿತ್ರರಂಗ ರಾಮ್‍ರಾವ್ ಅವರನ್ನೂ ಯಶಸ್ವಿ ನಾಯಕ ನಟನೆಂದು ಪರಿಗಣಿಸಿತು.
 	
ರಾಮರಾವ್ ನಟಿಸಿದ ಮೊದಲ ಪೌರಾಣಿಕ ಚಿತ್ರ ಮಾಯಬಜಾರ್. ಇದರಲ್ಲಿ ಇವರದು ಕೃಷ್ಣನ ಪಾತ್ರ. ಕೃಷ್ಣನ ಪಾತ್ರದ ಅದ್ಭುತ ನಟನೆಯಿಂದಾಗಿ ರಾಮರಾವ್ ಅವರಿಗೆ ಹೊಸ ಇಮೇಜ್ ಸೃಷ್ಟಿಯಾಯಿತು. ಇದರಿಂದಾಗಿ ಇವರು ಪೌರಾಣಿಕ ಪಾತ್ರಗಳಲ್ಲಿ ಹೆಚ್ಚಾಗಿ ನಟಿಸುವಂತಾಯಿತು. ರಾಮರಾವ್ ಅವರು ಕೃಷ್ಣನ ಪಾತ್ರಧಾರಿಯಾಗಿ 17 ಚಿತ್ರಗಳಲ್ಲಿ ನಟಿಸಿದ್ದಾರೆ. ಇವರು ನಟಿಸಿದ ಕೃಷ್ಣನ ಪಾತ್ರವೇ ಮುಂದೆ ಇವರು ರಾಜಕೀಯರಂಗ ಪ್ರವೇಶಿಸಲು ಪ್ರೇರಣೆನೀಡಿತು. ಪಿ. ಪುಲ್ಲಯ್ಯ ನಿರ್ದೇಶಿಸಿದ `ಶ್ರೀ ವೆಂಕಟೇಶ್ವರ ಮಹಾತ್ಮೆ ಚಿತ್ರದಲ್ಲಿ ವೆಂಕಟೇಶ್ವರನಾಗಿ ಇವರ ಅಭಿನಯ ಇವರನ್ನು ಸಜೀವ ದೇವತೆಯೆಂದು ಜನ ಭ್ರಮಿಸುವಂಥ ಮೋಡಿಯನ್ನು ಹಾಕಿತು. ಅನೇಕ ಅಭಿಮಾನಿಗಳು ಇವರ ಆರಾಧಕರಾದರು.
 	
ಎಪ್ಪತ್ತರ ದಶಕದಲ್ಲಿ ಸ್ವಂತ ನಿರ್ಮಾಣ ಸಂಸ್ಥೆಯಿಂದ ರಾಮರಾವ್ ಅವರು ಹಲವಾರು ಪೌರಾಣಿಕ ಚಿತ್ರಗಳನ್ನು ನಿರ್ದೇಶಿಸಿ, ನಟಿಸಿದರು. `ದಾನ ಶೂರ ವೀರ ಕರ್ಣ ಎಂಬ ಚಿತ್ರದಲ್ಲಿ ಮುಖ್ಯ ಪಾತ್ರಗಳಾದ ಕೃಷ್ಣ, ಕರ್ಣ, ದುರ್ಯೋಧನ-ಈ ಮೂರು ಪಾತ್ರಗಳಲ್ಲಿ ಇವರೇ ನಟಿಸಿದ್ದರು. ಈ ಚಿತ್ರದ ಮೂಲಕ ನಿರ್ದೇಶಕರಾಗಿಯೂ ರಾಮರಾವ್ ಜನಪ್ರಿಯತೆ ಗಳಿಸಿದರು. `ಶ್ರೀ ಕೃಷ್ಣಾವತಾರ ಅದ್ದೂರಿಯಾಗಿ ನಿರ್ಮಾಣವಾದ ಚಿತ್ರ. ಅನಂತರ `ಶ್ರೀ ರಾಮಪಟ್ಟಾಭಿಷೇಕಂ' ನಲ್ಲಿ ಹಲವು ಪಾತ್ರಗಳನ್ನು ಮಾಡಿದರು. ಶ್ರೀಮದ್‍ವಿರಾಟ್ ವೀರಬ್ರಹ್ಮೇಂದ್ರಸ್ವಾಮಿ ಚರಿತ್ರ (1984) ಎಂಬ ಚಿತ್ರದಲ್ಲಿ ಐದು ಮುಖ್ಯ ಪಾತ್ರಗಳಲ್ಲಿ ಇವರು ನಟಿಸಿದ್ದಾರೆ. ಜನಪದ ಕಲ್ಪನೆಗಳನ್ನು (ಫ್ಯಾಂಟಸಿ) ಬಳಸಿಕೊಂಡು `ಪಲ್ಲೆಟೂರು ಚಿತ್ರವನ್ನು ನಿರ್ಮಿಸಿದರು. ಇವರ ಅನೇಕ ಚಿತ್ರಗಳು ಶತದಿನೋತ್ಸವವನ್ನು ಆಚರಿಸಿವೆ. ಇವರು ಅದ್ದೂರಿಯ ತೆಲಗು ಚಿತ್ರಗಳನ್ನು ತಯಾರಿಸುವುದರ ಮೂಲಕ ಹಿಂದಿಚಿತ್ರರಂಗದಂತೆ ತೆಲುಗು ಚಿತ್ರರಂಗವನ್ನು ಶ್ರೀಮಂತಗೊಳಿಸಿದರು. ಯುಗಂಧರ್, ವೇಟಗಾಡು, ಬೊಬ್ಬುಲಿ ಪುಲಿ ಮುಂತಾದ ಸಾಮಾಜಿಕ ಚಿತ್ರಗಳಲ್ಲಿ ನಟಿಸಿ ಜನರ ಅಭಿಮಾನಕ್ಕೂ ಪ್ರೀತಿ ಆದರಗಳಿಗೂ ಪಾತ್ರರಾದರು. ಪೋಲಿಸ್ ಅಧಿಕಾರಿಯಾಗಿ, ಹೋರಾಟ ಮನೋಭಾವದ ನಾಯಕನಾಗಿ, ಸಮಾಜ ಘಾತುಕರ ವಿರುದ್ಧ ಸೆಣೆಸಾಡುವ ನಾಯಕನಾಗಿ ನಟಿಸಿಯೂ ಅಪಾರ ಜನಪ್ರಿಯತೆ ಪಡೆದರು.
 	
ಅಕ್ಬರ್ ಸಲೀಂ ಅನಾರ್ಕಲಿ ಇವರು ಅಭಿನಯಿಸಿದ ಮೊಗಲ್ ಚಕ್ರವರ್ತಿಯನ್ನು ಕುರಿತ ಐತಿಹಾಸಿಕ ಚಿತ್ರ. ಅಪಾರ ಹಣ ವೆಚ್ಚಮಾಡಿ ಬಹಳ ವಿಜೃಂಭಣೆಯಿಂದ ನಿರ್ಮಿಸಿದ ಮಹಾತ್ವಾಕಾಂಕ್ಷೆಯ ಚಿತ್ರವಿದು. ಈ ಚಿತ್ರದ ಹಲವಾರು ಗೀತೆಗಳು ಚಿತ್ರರಸಿಕರ ಮನದಲ್ಲಿ ಇಂದಿಗೂ ಉಳಿದಿವೆ.
 	
ರಾಮರಾವ್ ಅವರು 320 ಕ್ಕೂ ಹೆಚ್ಚು ಚಿತ್ರಗಳಲ್ಲಿ ಅಭಿನಯಿಸಿದ್ದಾರೆ. ಇವರು ನಟಿಸಿದ ಮುಖ್ಯ ಚಿತ್ರಗಳು: ಮನದೇಶಂ (1950), ಸಾವುಕಾರು (1951), ಸಂಸಾರಂ (1951), ಪಾತಾಳಭೈರವಿ (1952), ಮಲ್ಲೇಶ್ವರಿ (1952), ಪೆಳ್ಳಿಚೇಸಿಚೂಡು (1953), ಪಲ್ಲೆಟೂರು (1953), ದಾಸಿ (1953), ಚಂಡಿರಾಣಿ (1954), ಅಮ್ಮಲಕ್ಕಲು (1954), ಚಂದ್ರಹಾರಂ (1954), ತೋಡುದೊಂಗಲು (1955), ಮಿಸ್ಸಮ್ಮ (1956), ಚಿಂತಾಮಣಿ (1957), ತೆನಾಲಿರಾಮಕೃಷ್ಣ (1957), ಭಾಗ್ಯರೇಖ (1958), ಮಾಯಾಬಜಾರ್ (1958), ಭೂಕೈಲಾಸಂ (1959), ಅಪ್ಪುಚೇಸಿ ಪಪ್ಪುಕೂಡು (1959), ರಾಜಮುಕುಟಂ (1960), ಶ್ರೀ ವೆಂಕಟೇಶ್ವರ ಮಹಾತ್ಮೆ (1961), ಜಗದೇಕವೀರುನಿ ಕಥ (1964), ವಿವಾಹಬಂಧಂ (1965), ಕರ್ಣ (1965), ಪಾಂಡವ ವನವಾಸಂ (1966), ಸತ್ಯ ಹರಿಶ್ಚಂದ್ರ (1966), ಸಿ.ಐ.ಡಿ (1966), ಭಲೇ ಕೊಡಲು (1968), ಶ್ರೀಕೃಷ್ಣಾವತಾರಂ (1968), ಆಡಪಡುಚು (1968), ವರಕಟ್ನಂ (1969), ನಿಂಡುಹೃದಯಾಲು (1970), ಶ್ರೀರಾಮಾಂಜನೇಯ ಯುದ್ಧಂ (1976), ದಾನ ವೀರ ಶೂರ ಕರ್ಣ (1978), ಅಕ್ಬರ್ ಸಲೀಂ ಅನಾರ್ಕಲಿ (1979), ಶ್ರೀರಾಮಪಟ್ಟಾಭಿಷೇಕಂ (1979), ವೇಟಗಾಡು (1980), ಯುಗಂಧರ್ (1980).

 	ತೆಲಗು ಚಿತ್ರರಂಗದಲ್ಲಿ ಪ್ರಚಂಡ ಹೆಸರುಗಳಿಸಿ ಜನಮನವನ್ನು ತಮ್ಮ ಅಭಿನಯದಿಂದ ಸೂರೆಗೊಂಡ ರೀತಿಯಲ್ಲಿಯೇ ರಾಮರಾವ್ ಅವರು ಆಂಧ್ರಪ್ರದೇಶ ರಾಜ್ಯ ರಾಜಕಾರಣ ಹಾಗೂ ಭಾರತದ ರಾಜಕೀಯ ರಂಗದಲ್ಲಿ ಜನಸಮುದಾಯವನ್ನು ಉದ್ಬೋಧಗೊಳಿಸಿದರು. 1982ರ ಮಾರ್ಚ್ 29 ರಂದು `ತೆಲುಗುದೇಶಂ' ಎಂಬ ಪ್ರಾದೇಶಿಕ ಪಕ್ಷವನ್ನು ಹುಟ್ಟುಹಾಕುವುದರ ಮೂಲಕ ರಾಜಕೀಯ ರಂಗದಲ್ಲಿ ಹೊಸ ಅಲೆಯನ್ನು ಸೃಷ್ಟಿಸಿದರು. ಆಂಧ್ರಪ್ರದೇಶದಲ್ಲಿ ಸುಮಾರು ಮೂರೂವರೆ ದಶಕಕಾಲ ಅಧಿಕಾರರೂಢವಾಗಿದ್ದ ಕಾಂಗ್ರೆಸ್ ಪಕ್ಷದ ಆಡಳಿತವನ್ನು ತೆಲಗು ದೇಶಂ ಪಕ್ಷ ಧೂಳಿಪಟಮಾಡಿ 1982ರ ಚುನಾವಣೆಯಲ್ಲಿ ಪ್ರಚಂಡ ಬಹುಮತದಿಂದ ಆಯ್ಕೆಯಾಗಿ ರಾಜ್ಯದ ಅಧಿಕಾರದ ಚುಕ್ಕಾಣಿ ಹಿಡಿಯಿತು. ರಾಮರಾವ್ ಅವರು ಆಂಧ್ರಪ್ರದೇಶದ ಮುಖ್ಯಮಂತ್ರಿಯಾದರು (1983). ಇವರು ಚುನಾವಣಾ ಪ್ರಚಾರಕ್ಕಾಗಿ ಮೂರು ತಿಂಗಳಿನಲ್ಲಿ 35,000 ಕಿಮೀ ಪ್ರಯಾಣಿಸಿದ್ದು ದಾಖಲೆಯೇ ಆಗಿದೆ. 1989ರವರೆಗೂ ಇವರು ಆಂಧ್ರಪ್ರದೇಶದ ಮುಖ್ಯಮಂತ್ರಿಯಾಗಿದ್ದರು. ಆಗ ಅನೇಕ ಜನಪರ ಕಾರ್ಯಕ್ರಮಗಳನ್ನು ಕೈಗೊಂಡರು. ಬಡವರಿಗೆ ಕೆಜಿಗೆ ಎರಡು ರೂಪಾಯಿ ಬೆಲೆಯಲ್ಲಿ ಅಕ್ಕಿಯನ್ನು ಮಾರಾಟ ಮಾಡಿದ್ದು 'ತೆಲಗು ದೇಶಂ' ಪಕ್ಷದ ಸಾಧನೆಯಾಯಿತು. ಅನೇಕ ರಾಜಕೀಯ ಸ್ಥಿತ್ಯಂತರಗಳಿಂದಾಗಿ ತೆಲಗುದೇಶಂ ಪಕ್ಷ ಶಿಥಿಲಗೊಂಡು ತನ್ನ ವರ್ಚಸ್ಸನ್ನು ಕಳೆದುಕೊಂಡಿತು. 1989ರ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ಮತ್ತೆ ಅಧಿಕಾರವನ್ನು ಪಡೆಯಿತು.

 	ರಾಮರಾವ್ ಅವರು 1990ರಲ್ಲಿ ಮತ್ತೆ ಚಿತ್ರರಂಗಕ್ಕೆ ಮರಳಿದರು. ಬ್ರಹ್ಮರ್ಷಿ ವಿಶ್ವಾಮಿತ್ರ ಎಂಬ ಚಿತ್ರವನ್ನು ನಿರ್ದೇಶಿಸಿ ನಟಿಸಿದರು. ಆದರೆ ಈ ಚಿತ್ರ ಯಶಸ್ವಿಯಾಗಲಿಲ್ಲ. ರಾಮರಾಯರ ಕುಟುಂಬದಲ್ಲಿಯೇ ಉಂಟಾದ ಒಡಕುಗಳು, ಇವರ ಜೀವನದಲ್ಲಿ ಹೊಸದಾಗಿ ಲಕ್ಷ್ಮೀ ಪಾರ್ವತಿ ಎಂಬ ಮಹಿಳೆಯ ಪ್ರವೇಶ, ತೆಲಗುದೇಶಂ ಪಕ್ಷದಲ್ಲಿಯೇ ನಡೆದ ಆಂತರಿಕ ಬಂಡಾಯ ಮೊದಲಾದ ಸಂಗತಿಗಳು ಇವರ ರಾಜಕೀಯ ವೈಫಲ್ಯಕ್ಕೆ ಕಾರಣವಾದವು. ರಾಮರಾವ್ ಅವರು 1996 ಜನವರಿ 18 ರಂದು ಹಠಾತ್ ನಿಧನರಾದರು. ಇವರಿಗೆ ಏಳುಜನ ಗಂಡುಮಕ್ಕಳು. ನಾಲ್ಕು ಹೆಣ್ಣು ಮಕ್ಕಳು. ಇಂದಿನ (1998) ಆಂಧ್ರಪ್ರದೇಶದ ಮುಖ್ಯಮಂತ್ರಿಯಾಗಿರುವ ಚಂದ್ರಬಾಬುನಾಯ್ಡು ಇವರ ಅಳಿಯ. ರಾಮರಾವ್ ಅವರ ಮಗ ಬಾಲಕೃಷ್ಣ ತೆಲಗು ಚಿತ್ರರಂಗದ ಪ್ರಮುಖ ನಾಯಕರಲ್ಲೊಬ್ಬ. 

 	ರಾಮರಾವ್ ಅವರಿಗೆ ಅನೇಕ ಚಲನಚಿತ್ರ ಪ್ರಶಸ್ತಿಗಳು ಲಭ್ಯವಾಗಿವೆ. ಇವರಿಗೆ ಆಂಧ್ರ ವಿಶ್ವವಿದ್ಯಾಲಯ ಕಳಾಪ್ರಪೂರ್ಣ ಪ್ರಶಸ್ತಿಯನ್ನು ನೀಡಿ ಗೌರವಿಸಿದೆ.									
	*
ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ